ಆಟಕರ್ನಾಟಕಟಾಪ್ ನ್ಯೂಸ್ದೇಶಮಿಸ್ ಮಾಡಬೇಡಿರಾಜಕೀಯರಾಜ್ಯವಿದೇಶಸಿನಿಮಾಸೀರಿಯಲ್
ಬೆಳಗಾವಿಯಲ್ಲಿ ಮಹಾಮಳೆಗೆ ಬೆಚ್ಚಿಬಿದ್ದ ಜನ; ಡಿಸಿ ಕಚೇರಿಗೆ ನುಗ್ಗಿದ ನೀರು, ನದಿಯಂತಾದ ರಸ್ತೆಗಳು!

ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮಂಗಳವಾರ ಸಂಜೆ ಒಂದು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಮಳೆಯಿಂದ ಜನರು ಪರದಾಡಿದರು. ಸಿಡಿಲು ಮತ್ತು ಗುಡುಗಿನ ಅಬ್ಬರ ಜೋರಾಗಿತ್ತು.
ಮೂರು ದಿನಗಳ ಹಿಂದೆ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದ ಬಳಿಕ ಇಂದು ಮತ್ತೆ ಬೆಳಗಾವಿಗೆ ಮಳೆರಾಯ ಎಂಟ್ರಿ ಕೊಟ್ಟ. ಮಂಗಳವಾರ ಬೆಳಗ್ಗೆಯಿಂದ ಭಾರಿ ಬಿಸಿಲು ಇತ್ತು. ಸಂಜೆ 4 ಗಂಟೆ ಹೊತ್ತಿಗೆ ಏಕಾಏಕಿ ಜೋರಾಗಿ ಮಳೆ ಸುರಿಯಿತು. ಪರಿಣಾಮ ನಗರದ ಅನೇಕ ರಸ್ತೆಗಳ ತುಂಬಾ ನೀರು ಹರಿಯಿತು. ಬಹುತೇಕ ರಸ್ತೆಗಳು ಹೊಳೆಯ ಸ್ವರೂಪ ಪಡೆದುಕೊಂಡಿದ್ದವು.
ವಿವಿಧ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ನಾಗರಿಕರು, ಶಾಲಾ ಕಾಲೇಜಿಗೆ ಆಗಮಿಸಿದ್ದ ವಿದ್ಯಾರ್ಥಿಗಳು ಮಹಾಮಳೆಗೆ ಬೆಚ್ಚಿ ಬಿದ್ದರು. ವರುಣನ ಆರ್ಭಟದಿಂದ ಜನರ ಓಡಾಟ ಸ್ತಬ್ಧವಾಗಿ ಮಳೆಯಿಂದ ರಕ್ಷಿಸಿಕೊಳ್ಳಲು ರಸ್ತೆ ಪಕ್ಕದ ಕಟ್ಟಡಗಳು, ಅಂಗಡಿ, ಹೋಟೆಲ್ ಸೇರಿ ಮತ್ತಿತರ ಕಡೆ ಸಾರ್ವಜನಿಕರು ಆಶ್ರಯ ಪಡೆದುಕೊಂಡರು.
ಡಿಸಿ ಕಚೇರಿಗೆ ನುಗ್ಗಿದ ಮಳೆ ನೀರು: ನವೀಕರಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿಯೊಳಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಘಟನೆ ನಡೆಯಿತು. ಕಟ್ಟಡದಲ್ಲಿ ನೀರು ಸೋರಿಕೆ ಉಂಟಾಗಿ, ಜಿಲ್ಲಾಧಿಕಾರಿ ಅವರ ಕೊಠಡಿ, ಇನ್ನುಳಿದ ಅಧಿಕಾರಿಗಳ ಕೊಠಡಿ ಸೇರಿ ಇಡೀ ಕಟ್ಟಡದಲ್ಲಿ ನೀರು ನಿಂತಿತ್ತು. ನೀರು ಹೊರ ಹಾಕಲು ಕಚೇರಿಯ ಸಿಬ್ಬಂದಿ ಹರಸಾಹಸ ಪಟ್ಟರು. ಕಚೇರಿಗೆ ಬಂದಿದ್ದ ಸಾರ್ವಜನಿಕರು ಇದೇನಿದು ಡಿಸಿ ಕಚೇರಿಯೇ ಸೋರುತ್ತಿದೆಯಲ್ಲಾ ಅಂತಾ ಪರಸ್ಪರ ಚರ್ಚಿಸಿದರು.
ಇನ್ನು ರಾಣಿ ಚನ್ನಮ್ಮ ವೃತ್ತ, ಗಾಂಧಿ ನಗರ, ಕ್ಯಾಂಪ್ ಪ್ರದೇಶ, ಸದಾಶಿವ ನಗರ, ಮಹಾಂತೇಶ ನಗರ, ಸಹ್ಯಾದ್ರಿ ನಗರ, ಆಜಂ ನಗರ, ಶಿವಾಜಿ ನಗರ, ಖಡೇಬಜಾರ, ಹಳೆ ಪಿಬಿ ರಸ್ತೆ, ವಡಗಾವಿ, ಶಹಾಪುರ, ಹಿಂಡಲಗಾ, ಕಾಕತಿ ವೇಸ್, ಕಾಲೇಜು ರಸ್ತೆ, ಗ್ಲೋಬ್ ಚಿತ್ರ ಮಂದಿರ ಬಳಿ ಸೇರಿ ಮತ್ತಿತರ ಕಡೆ ರಸ್ತೆ ಮೇಲೆ ಮೇಲೆ ಅಪಾರ ಪ್ರಮಾಣದ ನೀರು ಹರಿಯಿತು. ಇನ್ನು ತಗ್ಗು ಪ್ರದೇಶದ ಕೆಲ ಮನೆಗಳಿಗೂ ನೀರು ನುಗ್ಗಿದ ಪರಿಣಾಮ, ನೀರು ಹೊರಗೆ ಹಾಕಲು ಮನೆಯವರೆಲ್ಲಾ ಪರದಾಡಿದರು. ಸಂಜೆ 5.30 ಬಳಿಕ ಮಳೆ ಶಾಂತವಾಯಿತು.



