ब्रेकिंग
ಬಂಗಾಳ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿ; ಬಿಜೆಪಿ ಮುಂದಿರುವ ಕಾನೂನು ಆಯ್ಕೆಗಳೇನು? ಮೋದಿ ಶುಭಾಶಯಕ್ಕೆ 1 ದಿನದ ಬಳಿಕ ದಳಪತಿ ವಿಜಯ್ ಕುತೂಹಲಕಾರಿ ಪ್ರತಿಕ್ರಿಯೆ; ಮೊದಲ ಟ್ವೀಟ್‌ನಲ್ಲೇ ಟಾಂಗ್‌! ಮತ್ತೆ ಉಪಚುನಾವಣೆ ಸೋತ ಬಿಜೆಪಿ : ಗೋಲ್ಡನ್ ಚಾನ್ಸ್ ಕೈತಪ್ಪಿದರೂ, ಪಾಠ ಕಲಿಯದ ಕಮಲ ಪಡೆ? ಪ್ರಧಾನಿ ಮೋದಿ ಮೇ 10 ಕ್ಕೆ ಕರ್ನಾಟಕಕ್ಕೆ ಆಗಮನ; ಬೆಂಗಳೂರಿಗೆ ಭೇಟಿ; ಏನೆಲ್ಲಾ ಕಾರ್ಯಕ್ರಮ? ಅಣ್ಣಾಮಲೈ ಹಾಕಿಕೊಟ್ಟಿದ್ದ ಸ್ಟೇಜ್’ನಲ್ಲಿ ವಿಜಯ್ ಭರ್ಜರಿ ಸ್ಟೆಪ್ : ದ್ರಾವಿಡರ ಲೆಕ್ಕಾಚಾರದಲ್ಲಿ ಅಮಿತ್ ಶಾ ಫೇಲ್? ಸಮಯ ನೀಡದ ಸ್ಥಳೀಯ ಶಾಸಕರು: ಆರು ತಿಂಗಳಿಂದ ಉದ್ಘಾಟನೆಗೆ ಕಾಯುತ್ತಿರುವ 22 ಇಂದಿರಾ ಕ್ಯಾಂಟೀನ್! ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್​ ಯೋಜನೆ ವಿರೋಧಿಸಿ ಅಹೋರಾತ್ರಿ ಧರಣಿ ಬೆಳಗಾವಿಯಲ್ಲಿ ಮಹಾಮಳೆಗೆ ಬೆಚ್ಚಿಬಿದ್ದ ಜನ; ಡಿಸಿ ಕಚೇರಿಗೆ ನುಗ್ಗಿದ ನೀರು, ನದಿಯಂತಾದ ರಸ್ತೆಗಳು! ಹಜ್ ಯಾತ್ರಿಕರಿಗೆ ಮತ್ತೆ ಪ್ರತ್ಯೇಕ ಟರ್ಮಿನಲ್ ಆರಂಭಿಸುವ ನಿರೀಕ್ಷೆಯಿದೆ: ಹಜ್ ಸಚಿವ ರಹೀಂ ಖಾನ್ ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸಾವು ಪ್ರಕರಣ; ಬೆಂಗಳೂರಿನಲ್ಲಿ ದೂರು ದಾಖಲಿಸಿದ ಎನ್‌ಸಿಪಿ ಎಸ್​ಪಿ ಶಾಸಕ ರೋಹಿತ್ ಪವ...
ಆಟಕರ್ನಾಟಕಟಾಪ್ ನ್ಯೂಸ್ದೇಶಮಿಸ್ ಮಾಡಬೇಡಿರಾಜಕೀಯರಾಜ್ಯವಿದೇಶಸಿನಿಮಾಸೀರಿಯಲ್

ಮತ್ತೆ ಉಪಚುನಾವಣೆ ಸೋತ ಬಿಜೆಪಿ : ಗೋಲ್ಡನ್ ಚಾನ್ಸ್ ಕೈತಪ್ಪಿದರೂ, ಪಾಠ ಕಲಿಯದ ಕಮಲ ಪಡೆ?

Davanagere South and Bagalkot Bypoll : ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ನಡೆದ ಎರಡನೇ ಉಪಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿದೆ. ಸಂಘಟಿತ ಪ್ರಯತ್ನದಿಂದ ಗೆಲ್ಲಬಹುದಾದ ಕ್ಷೇತ್ರವನ್ನು ಕೈಚೆಲ್ಲಿ ಕೂತಿದೆ. ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಮತ್ತೆ ಸೋತಿದೆ. ಬಾಗಲಕೋಟೆಯಲ್ಲಂತೂ ನಿರಾಯಾಸವಾಗಿ ಕಾಂಗ್ರೆಸ್ ಗೆದ್ದರೆ, ದಾವಣಗೆರೆಯಲ್ಲಿ ಪ್ರಯಾಸದ ಗೆಲುವನ್ನು ಕಾಂಗ್ರೆಸ್ ಕಂಡಿದೆ. ಈ ಚುನಾವಣೆಯಲ್ಲಿ ಬಿಜೆಪಿಯ ಮಿಸ್ಟೇಕ್ ಏನು?

ಬೆಂಗಳೂರು : ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಜೊತೆಗೆ, ಕರ್ನಾಟಕದ ಎರಡು ಅಸೆಂಬ್ಲಿ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು ಮತ್ತು ಎರಡೂ ಸ್ಥಾನವನ್ನು ಕಾಂಗ್ರೆಸ್ ಉಳಿಸಿಕೊಂಡಿದೆ. ಬಾಗಲಕೊಟೆಯಲ್ಲಿ ನಿರಾಯಾಸ ಗೆಲುವು ಸಾಧಿಸಿದರೆ, ದಾವಣಗೆರೆಯಲ್ಲಿ ಕಾಂಗ್ರೆಸ್, ಪ್ರಯಾಸದ ಗೆಲುವನ್ನು ಕಂಡಿತು. ಸರ್ಕಾರಕ್ಕೆ ಇದೆ ಎಂದು ಹೇಳಲಾಗುತ್ತಿರುವ ಆಡಳಿತ ವಿರೋಧಿ ಅಲೆಯನ್ನು ಮತವಾಗಿ ಕನ್ವರ್ಟ್ ಮಾಡಿಕೊಳ್ಳುವಲ್ಲಿ ಬಿಜೆಪಿ ವಿಫಲವಾಯಿತು.

ಕಾಂಗ್ರೆಸ್ಸಿನಲ್ಲಿ ಟಿಕೆಟ್’ಗಾಗಿ ಗೊಂದಲವಿತ್ತು, ದಾವಣಗೆರೆಯಲ್ಲಂತೂ ಟಿಕೆಟ್ ಪೈಪೋಟಿ ಹಾದಿಬೀದಿಗೆ ಬಂದಿತ್ತು. ಆದರೆ, ಇಂತಹ ಪರಿಸ್ಥಿತಿ ಬಿಜೆಪಿಗೆ ಇರಲಿಲ್ಲ. ಹೈಕಮಾಂಡ್ ಮುಂದೆ ಹಕ್ಕೊತ್ತಾಯ ಮಾಡಲು, ವಿಜಯೇಂದ್ರಗೆ ಇದೊಂದು ಸದಾವಕಾಶವಾಗಿತ್ತು. ಆದರೆ, ಬಿಜೆಪಿ, ಕಾಂಗ್ರೆಸ್ ವಿರುದ್ದದ ಉಪಚುನಾವಣೆಯ ಹೋರಾಟದಲ್ಲಿ ಮತ್ತೆ ಎಡವಿದೆ. ಈ ಸೋಲಿನ ಆತ್ಮವಿಮರ್ಶೆಯನ್ನು ಬಿಜೆಪಿ ಮಾಡಿಕೊಳ್ಳದೇ ಇದ್ದಲ್ಲಿ, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಇದೇ ಪರಿಸ್ಥಿತಿ ಎದುರಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಹಿಂದೆ ಗೆದ್ದಿದ್ದ ಸ್ಥಾನವನ್ನೂ ಉಳಿಸಿಕೊಳ್ಳಲಾಗದ ಬಿಜೆಪಿ

ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಇದು ಎರಡನೇ ಬಾರಿ ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ. ಹಿಂದೆ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಗೆದ್ದ ಹಿನ್ನಲೆಯಲ್ಲಿ ಸಂಡೂರು ಕಾಂಗ್ರೆಸ್ ಶಾಸಕ ಇ.ತುಕರಾಂ ರಾಜೀನಾಮೆ ನೀಡಿದ್ದರು. ಮಂಡ್ಯದಲ್ಲಿ ಗೆದ್ದ ಹಿನ್ನಲೆಯಲ್ಲಿ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರು. ಹಾವೇರಿ ಲೋಕಸಭಾ ಸ್ಥಾನ ಗೆದ್ದಿದ್ದರಿಂದ ಶಿಗ್ಗಾಂವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿದ್ದರು.

ಶಿಗ್ಗಾಂಗಿ, ಚನ್ನಪಟ್ಟಣ ಕ್ಷೇತ್ರವು, ಎನ್‌ಡಿಎ ಮೈತ್ರಿಕೂಟ ಹೊಂದಿದ್ದ ಸ್ಥಾನವಾಗಿತ್ತು ಮತ್ತು ಸಂಡೂರು ಮಾತ್ರ ಕಾಂಗ್ರೆಸ್ಸಿನ ಸ್ಥಾನವಾಗಿತ್ತು. ಆದರೆ, ಈ ಮೂರು ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್, ಎಲ್ಲಾ ಸ್ಥಾನವನ್ನು ಗೆದ್ದಿತ್ತು. ಹಿಂದೆ ಗೆದ್ದಿದ್ದ ಸ್ಥಾನವನ್ನೂ ಬಿಜೆಪಿಗೆ ಉಳಿಸಿಕೊಳ್ಳಲಾಗಲಿಲ್ಲ.

ಮತ್ತೆ ಉಪಚುನಾವಣೆಯಲ್ಲಿ ಬಿಜೆಪಿಗೆ ಸೋಲು

ಈಗ, ಮತ್ತದೇ ಸರದಿ. ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲೂ ಬಿಜೆಪಿ ಗೆಲುವಿನ ದಡ ದಾಟಲಿಲ್ಲ. ಎರಡೂ ಕಾಂಗ್ರೆಸ್ಸಿನ ಕ್ಷೇತ್ರವಾಗಿದ್ದರೂ, ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ದಿನಂಪ್ರತಿ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಅದನ್ನು ಎನ್ಕ್ಯಾಷ್ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ವಿರುದ್ದ ಹಲವು ಹೋರಾಟಗಳನ್ನು ಮಾಡಿಕೊಂಡು ಬರುತ್ತಿರುವ ಬಿಜೆಪಿಗೆ, ಅದನ್ನು ಮತವನ್ನಾಗಿ ಪರಿವರ್ತಿಸಲು ಸಾಧ್ಯವಾಗಲೇ ಇಲ್ಲ.

ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದು, BSY ಕುಟುಂಬವನ್ನು ಬೈಯ್ದು ಹೋದ ಯತ್ನಾಳ್

ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಬಿಜೆಪಿ ಸಂಘಟಿತ ಪ್ರಚಾರವನ್ನೇನೋ ಮಾಡಿತ್ತು. ದಾವಣಗೆರೆಗೆ ಪ್ರಚಾರಕ್ಕೆ ಬಾರದ ಬಸನಗೌಡ ಪಾಟೀಲ್ ಯತ್ನಾಳ್, ಬಾಗಲಕೋಟೆಯಲ್ಲಿ ಪ್ರಚಾರವನ್ನು ಮಾಡಿ ಹೋಗಿದ್ದರು. ಪ್ರಚಾರ ಮಾಡುವುದರ ಜೊತೆಗೆ, ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ಒಂದಷ್ಟು ಟೀಕಿಸಿ ಹೋಗಿದ್ದರು. ಇದು, ಎಲ್ಲೋ, ಬಿಜೆಪಿ ಕಾರ್ಯಕರ್ತರಿಗೂ ಕಸಿವಿಸಿಗೆ ಕಾರಣವಾಯಿತು. ಯಡಿಯೂರಪ್ಪನವರ ವಿರುದ್ದ ಯತ್ನಾಳ್ ವಾಗ್ದಾಳಿ ನಡೆಸುತ್ತಿದ್ದರೂ, ಮತ್ತೆಮತ್ತೆ ಅವರನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಯಿತು. ಇದಕ್ಕೆ ಕಡಿವಾಣ ಹಾಕದೇ ಹೋದಲ್ಲಿ, ಕಾರ್ಯಕರ್ತರು ಮತ್ತು ಮತದಾರರ ಗೊಂದಲಕ್ಕೆ ಮುಂದೆ ಕಾರಣವಾಗಬಹುದು.

ಬಿಜೆಪಿ ವಿರೋಧಿ ಬಣದ ಅಭ್ಯರ್ಥಿಗೆ ಕಮಲದ ಟಿಕೆಟ್

ದಾವಣಗೆರೆಯಲ್ಲಿ ಬಿಜೆಪಿ ಹೊಂದಾಣಿಕೆ ರಾಜಕೀಯ ಮಾಡಿಕೊಂಡಿದೆ ಎನ್ನುವ ಸುದ್ದಿಯು ಬಲವಾಗಿ ಹರಿದಾಡುತ್ತಿತ್ತು. ಯಾವಾಗ, ಮುಸ್ಲಿಮರಿಗೆ ಟಿಕೆಟ್ ನೀಡುವ ವಿಚಾರ ದೊಡ್ಡ ಸುದ್ದಿಯಾಯಿತೋ, ಈ ಸುದ್ದಿ ತೆರೆಮೆರೆಗೆ ಸರಿಯಲು ಆರಂಭಿಸಿತು. ಬಿಜೆಪಿಯ ಅಭ್ಯರ್ಥಿಯಾಗಿದ್ದ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಎಂಪಿ ಜಿಎಂ ಸಿದ್ದೇಶ್ವರ ಬಣಕ್ಕೆ ಸೇರಿದವರಾಗಿದ್ದರು. ಬಿಜೆಪಿಯಲ್ಲಿರುವ ಬಣ ರಾಜಕೀಯದಲ್ಲಿ ಸಿದ್ದೇಶ್ವರ, ಯಡಿಯೂರಪ್ಪನವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡವರು. ಒಳಗೊಳಗೆ ಕುದಿಯುತ್ತಿರುವ ಭಿನ್ನಮತದ ಏಟೂ, ಸೋಲಿಗೆ ಕಾರಣವಾಯಿತು ಎಂದು ವ್ಯಾಖ್ಯಾನಿಸಲಾಗುತ್ತಿದೆ.

ವಿಜಯೇಂದ್ರ ಎದುರಿಸುತ್ತಿರುವ ಎರಡನೇ ಉಪಚುನಾವಣೆ

ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ಬಿಜೆಪಿಯವರು ಎದುರಿಸುತ್ತಿರುವ ಎರಡನೇ ಉಪಚುನಾವಣೆ ಇದಾಗಿದೆ. “ಸೋಲುತ್ತೇವೆ ಎನ್ನುವ ನಿರೀಕ್ಷೆ ಇರಲಿಲ್ಲ, ಎಲ್ಲರೂ ಒಗ್ಗಟ್ಟಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೆವು, ಆದರೂ ಹಿನ್ನಡೆಯಾಗಿದೆ, ಆತ್ಮವಿಮರ್ಶೆ ಮಾಡಿಕೊಳ್ಳುತ್ತೇವೆ” ಎಂದು ವಿಜಯೇಂದ್ರ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ಸಿನಲ್ಲಿನ ಕುರ್ಚಿ ಫೈಟ್, ಬೆಲೆ ಏರಿಕೆ ಬಗ್ಗೆ ಬಿಜೆಪಿ, ಹೋರಾಟವನ್ನು ಮಾಡಿಕೊಂಡು ಬರುತ್ತಲೇ ಇದೆ. ಆದರೆ, ಇದನ್ನು ಸಮರ್ಥವಾಗಿ, ಜನರ ಮುಂದೆ ತೆಗೆದುಕೊಂಡು ಹೋಗಲು ವಿಫಲವಾಗುತ್ತಿದೆ.

ದಾವಣಗೆರೆಯ ವಿಚಾರಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ಸಿನಲ್ಲಿ ಹಲವು ಗೊಂದಲಗಳು ಇದ್ದವು. ಮುಸ್ಲಿಂ ಮತವಿಭಜನೆಯ ಭೀತಿಯೂ ಇತ್ತು. ನಾಯಕತ್ವದಲ್ಲೂ ಗೊಂದಲವಿತ್ತು, ಆದರೆ ಇದ್ಯಾವುದರ ಲಾಭವನ್ನೂ ಪಡೆದುಕೊಳ್ಳಲು ಬಿಜೆಪಿಗೆ ಸಾಧ್ಯವಾಗಿಲ್ಲ. ಚುನಾವಣೆಗೆ ಹೋಗುವ ಮುನ್ನ, ತಮ್ಮ ಒಳಜಗಳ, ಪ್ರತಿಷ್ಠೆ ಮುಂತಾದವುಗಳನ್ನು ಬಿಟ್ಟು, ಆಖಾಡಕ್ಕೆ ಇಳಿದರೆ ಮಾತ್ರ, ಕರ್ನಾಟಕ ಬಿಜೆಪಿಗೆ ಭವಿಷ್ಯವಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Related Articles

Leave a Reply

Your email address will not be published. Required fields are marked *

Back to top button