ವಿಮಾನ ದುರಂತದಲ್ಲಿ ಅಜಿತ್ ಪವಾರ್ ಸಾವು ಪ್ರಕರಣ; ಬೆಂಗಳೂರಿನಲ್ಲಿ ದೂರು ದಾಖಲಿಸಿದ ಎನ್‌ಸಿಪಿ ಎಸ್ಪಿ ಶಾಸಕ ರೋಹಿತ್ ಪವಾರ್

ಬೆಂಗಳೂರು: ವಿಮಾನ ದುರಂತದಲ್ಲಿ ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ವಿಮಾನ ದುರಂತದ ಹಿಂದೆ ದೊಡ್ಡ ಮಟ್ಟದ ಕ್ರಿಮಿನಲ್ ಪಿತೂರಿ ನಡೆದಿದೆ ಎಂಬ ಆರೋಪದಡಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಜಿತ್ ಪವಾರ್ ಅವರ ಅಳಿಯ ಹಾಗೂ ಎನ್‌ಸಿಪಿ ಎಸ್ಪಿ ಶಾಸಕ ರೋಹಿತ್ ಪವಾರ್ ಅವರು ನೀಡಿರುವ ದೂರಿನನ್ವಯ ಬೆಂಗಳೂರಿನಲ್ಲಿ ‘ಝಿರೋ ಎಫ್‌ಐಆರ್’ ದಾಖಲಾಗಿದೆ.
ದೂರಿನಲ್ಲಿರುವ ಅಂಶಗಳು: ಇದು ಕೇವಲ ಅಪಘಾತವಲ್ಲ, ಬದಲಾಗಿ ದೊಡ್ಡ ಮಟ್ಟದ ಕ್ರಿಮಿನಲ್ ಪಿತೂರಿ ಇರಬಹುದು ಎಂದು ಆರೋಪಿಸಿರುವ ರೋಹಿತ್ ಪವಾರ್, ಸುರಕ್ಷತಾ ನಿಯಮಗಳ ಉಲ್ಲಂಘನೆಯಾಗಿರುವುದಾಗಿ ಆರೋಪಿಸಿದ್ದಾರೆ. “ದುರಂತಕ್ಕೀಡಾದ ವಿಮಾನವು ಹಾರಾಟಕ್ಕೆ ಅಯೋಗ್ಯವಾಗಿತ್ತು ಎಂದು ಡಿಜಿಸಿಎ (DGCA) ವರದಿ ಹೇಳಿದೆ. ವಿಮಾನದ ಇಂಜಿನ್ ಮಿತಿ ಮುಗಿಯುವ ಹಂತದಲ್ಲಿದ್ದರೂ ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿತ್ತು. ವಿಮಾನದ ಹಾರಾಟದ ಸಮಯವನ್ನು ದಾಖಲೆಗಳಲ್ಲಿ ಕಡಿಮೆ ತೋರಿಸಲಾಗಿತ್ತು. ವಾಸ್ತವವಾಗಿ ವಿಮಾನವು 8,000 ಗಂಟೆಗಳಿಗಿಂತ ಹೆಚ್ಚು ಹಾರಾಟ ನಡೆಸಿತ್ತು ಎನ್ನಲಾಗಿದೆ. ಮುಖ್ಯ ಪೈಲಟ್ ಸುಮಿತ್ ಕಪೂರ್ ಅವರಿಗೆ ಮದ್ಯಪಾನದ ಚಟವಿತ್ತು ಮತ್ತು ಈ ಹಿಂದೆ ಅವರ ಪರವಾನಗಿಯನ್ನು ಅಮಾನತುಗೊಳಿಸಲಾಗಿತ್ತು ಎಂದು ರೋಹಿತ್ ಪವಾರ್ ಆರೋಪಿಸಿದ್ದಾರೆ.
ಸುರಕ್ಷಿತ ರನ್‌ವೇ ಬಿಟ್ಟು ಟೇಬಲ್‌ಟಾಪ್ ರನ್‌ವೇ ಬಳಸಿದ್ದೇಕೆ?- ಸೂಕ್ತ ತನಿಖೆಗೆ ಒತ್ತಾಯ: ಅಂದು ದೃಶ್ಯದರ್ಶಕ ಮಿತಿ ಕನಿಷ್ಠ 5 ಕಿ.ಮೀ ಇರಬೇಕಿತ್ತು. ಆದರೆ, ಕೇವಲ 2-3 ಕಿ.ಮೀ ಇದ್ದರೂ ವಿಮಾನ ಇಳಿಸಲು ಅನುಮತಿ ನೀಡಲಾಗಿತ್ತು. ಅಂತಿಮ ಕ್ಷಣದಲ್ಲಿ ಸುರಕ್ಷಿತ ರನ್‌ವೇ ಬಿಟ್ಟು ಅಪಾಯಕಾರಿ ‘ಟೇಬಲ್‌ಟಾಪ್’ ರನ್‌ವೇಯನ್ನು ಬಳಸಲಾಗಿತ್ತು. ವಿಮಾನ ಪತನಗೊಳ್ಳುವ ಮುನ್ನ ಸಹ-ಪೈಲಟ್ ‘ಓಹ್ ಶಿಟ್’ ಎಂದು ಕಿರುಚಿದ್ದರು. ಆದರೆ, ಮುಖ್ಯ ಪೈಲಟ್ ಯಾವುದೇ ತುರ್ತು ಸಂದೇಶ ರವಾನಿಸದೆ ಮೌನವಾಗಿದ್ದರು. ಇದು ಅವರು ಮದ್ಯದ ಅಮಲಿನಲ್ಲಿದ್ದರೋ ಅಥವಾ ಉದ್ದೇಶಪೂರ್ವಕವಾಗಿ ಸುಮ್ಮನಿದ್ದರೋ ಎಂಬ ಶಂಕೆ ಮೂಡಿಸಿದೆ. ಇದು ವ್ಯವಸ್ಥಿತ ಪಿತೂರಿಯಾಗಿದ್ದು, ಕೇವಲ ತಾಂತ್ರಿಕ ತನಿಖೆಯಲ್ಲದೇ ಆಳವಾದ ಕ್ರಿಮಿನಲ್ ತನಿಖೆ ನಡೆಯಬೇಕು ಎಂದು ಅವರು ದೂರಿನ ಮೂಲಕ ಆಗ್ರಹಿಸಿದ್ದಾರೆ.
ಜನವರಿ 28, 2026 ರಂದು ಮುಂಬೈನಿಂದ ಬಾರಾಮತಿಗೆ ಪ್ರಯಾಣಿಸುತ್ತಿದ್ದ ಬಾಂಬಾರ್ಡಿಯರ್ ಲಿಯರ್‌ಜೆಟ್ 45 ವಿಮಾನ ಪತನಗೊಂಡು, ಅಂದಿನ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದರು.



