ಪ್ರಧಾನಿ ಮೋದಿ ಮೇ 10 ಕ್ಕೆ ಕರ್ನಾಟಕಕ್ಕೆ ಆಗಮನ; ಬೆಂಗಳೂರಿಗೆ ಭೇಟಿ; ಏನೆಲ್ಲಾ ಕಾರ್ಯಕ್ರಮ?

ಪ್ರಧಾನಿ ನರೇಂದ್ರ ಮೋದಿಯವರು ಮೇ 10ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ನಡೆಯಲಿರುವ ಸಂಸ್ಥೆಯ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿ ಅವರ 70ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವರು. ಇದೇ ವೇಳೆ, ವಿವಿಧ ಸಾಂಪ್ರದಾಯಿಕ ಕಲೆಗಳಿಂದ ಸಿಂಗಾರಗೊಂಡಿರುವ ನೂತನ ಧ್ಯಾನ ಮಂದಿರವನ್ನು ಪ್ರಧಾನಿ ಉದ್ಘಾಟಿಸಲಿದ್ದು, ಮೇ 25ರವರೆಗೆ ಆಶ್ರಮದಲ್ಲಿ ಹಲವು ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮೇ 10 ರಂದು ರಾಜ್ಯಕ್ಕೆ ಆಗಮಿಸಲಿದ್ದು, ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಆ ದಿನ ಆರ್ಟ್ ಆಫ್ ಲಿವಿಂಗ್ ವರ್ಷಾಚರಣೆ, ರವಿಶಂಕರ್ ಗುರೂಜಿ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೇ 10 ರಂದು ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾಗಿರುವ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷಾಚರಣೆ ಹಾಗೂ ರವಿಶಂಕರ್ ಗುರೂಜಿಯವರ 70ನೇ ವರ್ಷದ ಹುಟ್ಟುಹಬ್ಬ ಆಚರಣೆ ನೆರವೇರಲಿದೆ. ನಗರದ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆಯಲಿದೆ. ಇದೇ ವೇಳೆ ಆಶ್ರಮದ ಆವರಣದಲ್ಲಿನಿರ್ಮಾಣಗೊಂಡಿರುವ ನೂತನ ಧ್ಯಾನ ಮಂದಿರ ಉದ್ಘಾಟನೆಯಾಗಲಿದ್ದು, ಹಲವು ವಿಶೇಷಗಳನ್ನು ಹೊಂದಿರುವ ಧ್ಯಾನ ಮಂದಿರದ ಅನಾವರಣದ ಜತೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ.
ಆರ್ಟ್ ಆಫ್ ಲಿವಿಂಗ್ನ ಈ ನೂತನ ಧ್ಯಾನಮಂದಿರದಲ್ಲಿ ವಾರ್ಲಿ, ಮಧುಬನಿ, ಪಟ್ಟಚಿತ್ತ, ತಂಜಾವೂರು, ಸೋಹ್ರಾಹ್, ಕೊಹ್ಬರ್, ಗೊಂಡ್ ಮತ್ತು ಪಿಚ್ವಾಯಿ ಕಲೆಗಳನ್ನು ಬಳಕೆ ಮಾಡಲಾಗಿದ್ದು, ಈ ಸುಂದರ ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲು ಅಂದಿನಿಂದ ಅವಕಾಶ ಸಿಗಲಿದೆ.
ಮೇ 10 ರಿಂದ 25 ವರೆಗೂ ಕಾರ್ಯಕ್ರಮ
ಮಾನಸಿಕ, ಆಧ್ಯಾತ್ಮಿಕ ಸಾಧನೆಗಳ ಮೂಲಕ ಜನರಿಗೆ ಮಾರ್ಗದರ್ಶನ ನೀಡುತ್ತಾ ಬಂದಿರುವ ಆರ್ಟ್ ಆಫ್ ಲಿವಿಂಗ್, 45 ವರ್ಷಗಳನ್ನು ಪೂರೈಸುತ್ತಿದ್ದು, ಮೇ 10 ರಿಂದ 25ರವರೆಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ನಾನಾ ಕ್ಷೇತ್ರಗಳ ಗಣ್ಯರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಲಿದ್ದಾರೆ.



